ಮೇಲುಗಾಲುವೆ -
ಯಾವುದೇ ಉದ್ದೇಶಕ್ಕಾಗಲಿ ನೀರನ್ನು ಹೊಳೆಗಳ ಮೇಲೂ ನೆಲದ ಕೆಳಗಡೆಯೂ ದೂರದ ಮತ್ತೊಂದೆಡೆ ಸಾಗಿಸುವ ತೂಬು ಇಲ್ಲವೆ ಸುರಂಗ ವ್ಯವಸ್ಥೆ (ಆಕ್ವಡಕ್ಟ್).  ಇಂಥ ಏರ್ಪಾಡುಗಳು 14ನೆಯ ಶತಮಾನದಲ್ಲಿ ಈಜಿಪ್ಟಿನಲ್ಲಿ ಬಳಕೆಯಲ್ಲಿತ್ತು ಎಂದು ತಿಳಿದುಬರುತ್ತದೆ. ರೋಮ್ ನಗರಕ್ಕೆ ಕುಡಿಯುವ ನೀರನ್ನು ದೂರದ ಸರೋವರಗಳಿಂದ ಒದಗಿಸುತ್ತಿದ್ದ ಮೇಲುಗಾಲುವೆಗಳನ್ನು ಎಂಜಿನಿಯರಿಂಗ್ ಚಾತುರ್ಯವೆನ್ನಬಹುದು.  ಲಯನ್ಸ್‍ನಗರ ಜೆರೂಸಲೆಮ್‍ಗಳಲ್ಲೂ ಮೇಲುಗಾಲುವೆಯ ಏರ್ಪಾಡು ಇತ್ತು. ಜರ್ಮನಿ, ಇಂಗ್ಲೆಂಡುಗಳಲ್ಲಿ ಇದ್ದ ಮೇಲುಗಾಲುವೆಯ ವ್ಯವಸ್ಥೆಯಲ್ಲಿ ಕಲ್ಲುಗಾರೆಯಿಂದ ಮಾಡಿದ ತೂಬುಗಳನ್ನು ಕಬ್ಬಿಣದ ನಡುಪಟ್ಟಿಗಳಿಂದ ಕೂಡಿಸಿದ ಮರದ ತೂಬುಗಳು ಇದ್ದುವು.

ನೀರು ಸರಬರಾಜು ಕೆಲವು ಉದ್ದೇಶಗಳಿದ್ದವು : 1 ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು, 2 ನೀರಾವರಿ ಸೌಲಭ್ಯದ ಏರ್ಪಾಡು, 3 ಜಲವಿದ್ಯುತ್ತಿನ ಉತ್ಪಾದನೆ ಇತ್ಯಾದಿ. ಇಲ್ಲೆಲ್ಲ ಉದ್ದನೆಯ ದೊಡ್ಡ ಮೇಲುಗಾಲುವೆಗಳು ಅಗತ್ಯ.

ಹಿಂದಿನ ಕಾಲದಲ್ಲಿ ಮೇಲುಗಾಲುವೆಗಳನ್ನು ಕಲ್ಲುಗಾರೆಯಿಂದ ಕಟ್ಟಿ ನೀರು ಹರಿಯುವ  ದಿಕ್ಕಿನಲ್ಲಿ ಕೊಂಚ ಇಳುಕಲ್ಲನ್ನು ಒದಗಿಸುತ್ತಿದ್ದರು. ಬದಲಾದ ಸಂದರ್ಭಗಳಿಗೆ ಅನುಗುಣವಾಗಿ ನೀರನ್ನು ಸುರಂಗಗಳಲ್ಲಿಯೂ ದೊಡ್ಡ ತೂಬುಗಳಲ್ಲಿಯೂ ಆಧುನಿಕ ಒತ್ತಡದಲ್ಲಿ ಒಯ್ಯುವುದು ಆಧುನಿಕ ವಿಧಾನ. ಮೇಲುಗಾಲುವೆಯ ನಿರ್ಮಾಣದಲ್ಲಿ ಎಳೆತದ ತ್ರಾಸಭರಿಸುವಂಥ ಎರಕದದ ಕಬ್ಬಿಣದ ತೂಬುಗಳನ್ನೊ ಉಕ್ಕಿನ ತೂಬುಗಳನ್ನೊ ಭದ್ರಕಾಂಕ್ರೀಟಿನ ತೂಬು ಇಲ್ಲವೆ ಸುರಂಗಗಳನ್ನೊ ಬಳಸುವುದಿದೆ.

ಮೇಲುಗಾಲುವೆಗಳು ನಗರಗಳ ನೀರಿನ ಸರಬರಾಜಿನ ಯೋಜನೆಗಳಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಪ್ರಪಂಚದ ಆಧುನಿಕ  ನಗರಗಳಿಗೆ  ಸರಬರಾಜಾಗುವ ನೀರಿನ ನೂರಾರು ಕಿಲೋಮೀಟರುಗಳ ಉದ್ದದ ಸುರಂಗ ಇಲ್ಲವೆ ತೂಬಿನ ಮೂಲಕ ಹರಿದುಬರುತ್ತದೆ.  ಜಲವಿದ್ಯುತ್ತಿನ ಯೋಜನೆಗಳಲ್ಲಿ ಅಧಿಕ ಒತ್ತಡವನ್ನು ತಡೆಯುವ ಮೇಲುಗಾಲುವೆಗಳ ಉಪಯೋಗ ಉಂಟು.
(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ